ಕಾಟನ್‍ವುಲ್   

ಆಸ್ಪತ್ರೆಗಳಲ್ಲಿ ಅಥವಾ ವೈದ್ಯ ಚಿಕಿತ್ಸೆ ಸಂದರ್ಭಗಳಲ್ಲಿ ಉಪಯೋಗಿಸತಕ್ಕ, ಹೀರುವ ಶಕ್ತಿ ಇರುವ ಹತ್ತಿ. ಅರಳೆಯನ್ನು ಎಕ್ಕಿ ಚೆಲುವೆ ಮಾಡಿ ಅದರ ಮೇಲಿರುವ ಮೇಣದ ಕವಚವನ್ನು ತೆಗೆದು ಶುಭ್ರ ಮಾಡಿ ಅದು ನೀರನ್ನು ಹೀರುವುದಕ್ಕೆ ಯೋಗ್ಯವಾಗುವಂತೆ ಮಾಡುವರು. ಅನಂತರ ಅದನ್ನು ರೋಬರ್ ಮೂಲಕ ಹಾಸಿ ಹಾಳೆಗಳಂತೆ ಅದುಮುವರು. ಹೀಗೆ ತಯಾರಿಸಿದ ಹತ್ತಿಯನ್ನು ರಕ್ತ, ಕೀವು, ನೀರು ಅಥವಾ ಇತರೇ ದ್ರಾವಕಗಳನ್ನು ಹೀರುವುದಕ್ಕೂ ಗಾಯವನ್ನು ರಕ್ಷಿಸುವುದಕ್ಕೂ ತೊಳೆಯುವುದಕ್ಕೂ ಉಪಯೋಗಿಸುವರು. ಈ ಹತ್ತಿ ಗಿಡದ ಎಲೆ, ತೊಟ್ಟು ಅಥವಾ ಇತರೇ ಕಳಂಕಗಳು ಯಾವುದೂ ಇಲ್ಲದಂತೆ ಶುಭ್ರವಾಗಿರಬೇಕು. ಇದು ವೈದ್ಯಕೀಯ ಕ್ರಮಗಳಿಗೆ ಉಪಯೋಗಿಸತಕ್ಕದ್ದು ಎಂಬುದರ ಸಂಕೇತವಾಗಿ ಇದಕ್ಕೆ ಸ್ವಲ್ಪ ರಂಗು ಹಾಕಿರುವರು. ವೈಜ್ಞಾನಿಕ ಸಂಶೋಧನೆಗಳಲ್ಲಿ ಕುಪ್ಪಿ, ಫ್ಲಾಸ್ಕು, ಇತ್ಯಾದಿಗಳಲ್ಲಿ ಇಡುವ ವಸ್ತುಗಳನ್ನು ಗಾಳಿಯ ಸೋಂಕಿನಿಂದ ರಕ್ಷಿಸುವುದಕ್ಕೆ ಅವುಗಳ ಬಾಯಿಗಳನ್ನು ಈ ಹತ್ತಿಯಿಂದ ಚೆನ್ನಾಗಿ ತುಂಬುತ್ತಾರೆ. 

(ಎಸ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ